ಫ್ರಾಂಕ್‍ಲಿನ್, ಜಾನ್
	 1786-1847. ಉತ್ತರ ಧ್ರುವ ಪ್ರದೇಶದ ಪ್ರಥಮ ಪರಿಶೋಧಕ. ಇಂಗ್ಲೆಂಡಿನ ಲಂಕಾಷೈರಿನಲ್ಲಿ ಜನಿಸಿದ ಫ್ರಾಂಕ್‍ಲಿನ್ ತನ್ನ 15ನೆಯ ವಯಸ್ಸಿನಲ್ಲಿ (1801) ಬ್ರಿಟಿಷ್ ಹಡಗು ಪಡೆ ಸೇರಿದ. 1803ರಲ್ಲಿ ಮ್ಯಾಥ್ಯೂ ಫ್ಲಿಂಡರ್ಸ್ ಅವರ ಆಸ್ಟ್ರೇಲಿಯದ ಸುತ್ತ ಬಳಸು ಯಾನದಲ್ಲಿ ಈತನೂ ಸೇರಿದ್ದ. ಟ್ರಫಾಲ್ಗರ್ (1805) ಮತ್ತು ನ್ಯೂ ಆರ್ಲಿಯನ್ಸ್ (1814-15) ಕದನಗಳಲ್ಲಿ ಭಾಗವಹಿಸಿದ್ದ. ಈತ 1819ರಲ್ಲಿ ಪ್ರಥಮವಾಗಿ ಉತ್ತರ ಧ್ರುವ ಪ್ರದೇಶದ ಅನ್ವೇಷಣೆಗೆ ಹೊರಟ. 1825ರಲ್ಲಿ ಎರಡನೆಬಾರಿ ಮತ್ತು 1845ರಲ್ಲಿ ಮೂರನೆ ಬಾರಿ ಪರಿಶೋಧನಕ್ಕೆ ತಕ್ಕ ಸಿದ್ಧತೆಗಳೊಂದಿಗೆ ಹೋದ ಈತ ಮತ್ತು ಈತನ ಸಂಗಡಿಗರು ಮರಳಿ ಬರಲಿಲ್ಲ.

	ರಕ್ಷಣೆಗೆ ಮತ್ತು ಫ್ರಾಂಕ್‍ಲಿನ್ ತಂಡವನ್ನು ಪತ್ತೆ ಹಚ್ಚಲು ಅನೇಕ ತಂಡಗಳು ಹೋದವು. ಅಲ್ಲಿ ಫ್ರಾಂಕ್‍ಲಿನ್ ತಂಡದವರ ಶಿಬಿರಗಳನ್ನು ಪತ್ತೆ ಹಚ್ಚಲಾಯಿತಾದರೂ (1930), ಫ್ರಾಂಕ್‍ಲಿನ್ ಸಹಿತ ತಂಡದ ಒಬ್ಬ ವ್ಯಕ್ತಿಯೂ ಪತ್ತೆಯಾಗಲಿಲ್ಲ. ಇವರ ಪತ್ತೆ ಕಾರ್ಯದ ನೆಪದಲ್ಲಿ ಉತ್ತರ ಅಮೆರಿಕದ ಧ್ರುವ ಪ್ರದೇಶದ ಸಂಪೂರ್ಣ ಶೋಧನೆ ನಡೆದಂತಾಯಿತು.	       *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ